ವಿಜ್ಞಾನ ಕರ್ಣಾಟಕ -
	ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುತ್ತಿರುವ (1969 ಫೆಬ್ರವರಿ 21) ವಿಜ್ಞಾನ ತ್ರೈಮಾಸಿಕ. ಸುಮಾರು 1919ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಆಶ್ರಯದಲ್ಲಿ ಎ.ಆರ್.ಕೃಷ್ಣಶಾಸ್ತ್ರೀಗಳ ಸಾರಥ್ಯದಲ್ಲಿ ಮೂಡಿಬರ ಲಾರಂಭಿಸಿ 1939ರಲ್ಲಿ ಅವರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗಕ್ಕೆ ವಲಸೆ ಬಂದ ಪ್ರಬುದ್ಧ ಕರ್ಣಾಟಕ ತ್ರೈಮಾಸಿಕದ ಕೂಸು. ಪ್ರಧಾನವಾಗಿ ಸಾಹಿತ್ಯಸಂಚಿಕೆ ಇದಾಗಿದ್ದರೂ ನಡುನಡುವೆ ಒಂದೋ ಎರಡೋ ವೈಜ್ಞಾನಿಕ ಲೇಖನಗಳು ಪ್ರಕಟವಾಗುತ್ತಿದ್ದವು. ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಪ್ರಕಟವಾಗದ ಹೊರತು ಭಾಷೆ ಬೆಳೆಯಲಾರದೆಂದು ನಂಬಿದ್ದವರು ಅಂದಿನ ಪ್ರಸಾರಾಂಗದ ಕಾರ್ಯದರ್ಶಿ ದೇ. ಜವರೇಗೌಡರು. ರಾಷ್ಟ್ರಕವಿ ಕುವೆಂಪು ಅವರ ಆಶೀರ್ವಾದದೊಂದಿಗೆ 1957ರಲ್ಲಿ ವರ್ಷಕ್ಕೊಮ್ಮೆ ವಿಶೇಷ ವಿಜ್ಞಾನಾಂಕವನ್ನು ಪ್ರತ್ಯೇಕವಾಗಿ ಪ್ರಕಟಿಸುವ ಅವರ ನಿರ್ಧಾರವೇ ಮುಂದೆ ವಿಜ್ಞಾನ ಕರ್ಣಾಟಕದ ಪ್ರಕಟಣೆಗೆ ಕಾರಣ. ಈ ಪ್ರಯತ್ನದ ಯಶಸ್ಸಿನ ಫಲವೇ 1960 ರಿಂದ ಆರು ತಿಂಗಳಿಗೊಮ್ಮೆ ಪ್ರಕಟವಾಗತೊಡಗಿದ ವಿಶೇಷ ವೈಜ್ಞಾನಿಕ ಪುರವಣಿ. ಮುಂದಿನ ಒಂದೆರಡು ವರ್ಷಗಳಲ್ಲಿ ಕಾರಣಾಂತರದಿಂದ ಈ ವಿಶೇಷ ಪ್ರಕಟಣೆ ನಿಂತು ಹೋದರೂ ವಿಜ್ಞಾನ ಕರ್ಣಾಟಕದ ಪ್ರಕಟಣೆಗೆ ಅಡಿಪಾಯ ಸಿದ್ಧವಾಗಿತ್ತು. ಪ್ರಬುದ್ಧ ಕರ್ಣಾಟಕದ ಚಿನ್ನದ ಹಬ್ಬದ ವೇಳೆಗಾದರೂ ವಿಜ್ಞಾನ ಪತ್ರಿಕೆಯೊಂದನ್ನು ಅಸ್ತಿತ್ವಕ್ಕೆ ತರಬೇಕೆಂದು ಸಂಪಾದಕ ಮಂಡಲಿಯ ದೇಜಗೌ ಪ್ರೇರಿತ ತೀರ್ಮಾನ. ಇದು ಗುಣಮಟ್ಟದಲ್ಲಿ ಸೈಂಟಿಫಿಕ್ ಅಮೆರಿಕನ್‍ಗೆ ಸಮನಾಗಿರಬೇಕೆಂಬ ಕನಸು. ಈ ಕನಸಿನ ಕೂಸಿಗೆ ಹಾ.ಮಾ.ನಾಯಕರಿಂದ ವಿಜ್ಞಾನ ಕರ್ಣಾಟಕ ಎಂದು ನಾಮಕರಣ. 1969ರಲ್ಲಿ ಪ್ರಕಟವಾದ ಪ್ರಬುದ್ಧ ಕರ್ಣಾಟಕದ ಚಿನ್ನದ ಹಬ್ಬದ ವಿಶೇಷ ಸಂಚಿಕೆಯ ಎರಡು ಸಂಪುಟಗಳು ಆವರೆಗೆ ಪ್ರಕಟವಾಗಿದ್ದ ವಿಜ್ಞಾನ ಲೇಖನಗಳಿಗೆ ಮೀಸಲು. ಈ ಸಂಪುಟಗಳ ಯಶಸ್ಸಿನ ರೂವಾರಿ ಜೆ. ಆರ್. ಲಕ್ಷ್ಮಣರಾಯರು. ವಿಜ್ಞಾನ ಕರ್ಣಾಟಕದ ಸಂಪಾದಕತ್ವದ ಗುರುತರ ಜವಾಬ್ದಾರಿಯನ್ನು ಅವರಿಗೇ ವಹಿಸಲಾಯಿತು. ಇವರೊಂದಿಗೆ ಕೈಗೂಡಿಸಿದವರು ಬನ್ನೂರು ನಂ. ಬೋಳೇಗೌಡ. ಇವರೀರ್ವರ ಸಾರಥ್ಯದಲ್ಲಿ ವಿಜ್ಞಾನ ಕರ್ಣಾಟಕ ಪ್ರಕಟಣೆಯ ಆರಂಭ. ಪ್ರಬುದ್ಧ ಕರ್ಣಾಟಕದ ಚಿನ್ನದ ಹಬ್ಬ ರಾಷ್ಟ್ರಕವಿ ಕುವೆಂಪು ಅವರಿಂದ ಉದ್ಘಾಟನೆ ಆಗುತ್ತಿರುವ ಶುಭ ಸಂದರ್ಭ; ಕನ್ನಡನಾಡಿನ ನಾನಾ ಭಾಗಗಳ ಪ್ರಸಿದ್ಧ ಸಾಹಿತಿಗಳ ಸಮ್ಮುಖದಲ್ಲಿ ಅಂದಿನ ಕುಲಪತಿ ಕೆ.ಎಲ್. ಶ್ರೀಮಾಲಿಯವರಿಂದ ವಿಜ್ಞಾನ ಕರ್ಣಾಟಕದ ಪ್ರಥಮ ಸಂಚಿಕೆಯ ಅನಾವರಣ. ಪತ್ರಿಕೆ ಜನ್ಮವೆತ್ತಿದಾಗ ಸಂಪಾದಕರೊಡನಿದ್ದು ಅವರನ್ನು ಉತ್ತೇಜಿಸುತ್ತಿದ್ದ ಕನ್ನಡ ವಿಜ್ಞಾನ ಸಾಹಿತ್ಯದ ಅವಿಸ್ಮರಣೀಯ ವಿದ್ವಾಂಸ ಆರ್. ಎಲ್. ನರಸಿಂಹಯ್ಯ ಅವರು ಮರಣಿಸಿದ್ದರಿಂದ ಮೊದಲನೆಯ ವರ್ಷದ ಕೊನೆಯ ಸಂಪುಟದಲ್ಲಿ ಅವರ ಹೆಸರಿನ ವಿಶೇಷ ಪುರವಣಿ ಪ್ರಕಟಣೆಯ ಹೆಗ್ಗಳಿಕೆಗೆ ಪಾತ್ರ. ಬಿ. ವಿ. ಗೋವಿಂದರಾಜುಲು (1925-80) ಮತ್ತು ಎಚ್. ಸಂಜೀವಯ್ಯ ಅವರ ಸಾರಥ್ಯದಲ್ಲಿ ಪ್ರವರ್ಧಿಸಿದ ವಿಜ್ಞಾನ ಕರ್ಣಾಟಕ 1979ರಲ್ಲಿ ಪ್ರಕಟಿಸಿದ ಆಲ್ಬರ್ಟ್ ಐನ್‍ಸ್ಟೈನ್ ಶತಾಬ್ದಿ ಸಂಚಿಕೆಯೂ ಸೇರಿದಂತೆ ಎಲ್ಲ ಸಂಪುಟಗಳೂ ಸಂಗ್ರಹಯೋಗ್ಯ. ಕನ್ನಡದಲ್ಲಿ ಮೌಲಿಕ ವಿಜ್ಞಾನ ಸಾಹಿತ್ಯ ಸೃಷ್ಟಿ ಸಾಧ್ಯ ಎಂದು ಸಾಧಿಸಿ ತೋರಿಸಿದ ಹೆಗ್ಗಳಿಕೆ ಈ ಪತ್ರಿಕೆಯದು.		
	*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ